ಪ್ರೂಸ್ಟ್, ಮಾರ್ಸೆಲ್
	1871-1922. ಪ್ರಸಿದ್ಧ ಫ್ರೆಂಚ್ ಕಾದಂಬರಿಕಾರ. ಪ್ಯಾರಿಸ್ಸಿನಲ್ಲಿ ಹುಟ್ಟಿ ಬೆಳೆದು ಬದುಕು ನಡೆಸಿ ಕೊನೆಗೆ ಅಲ್ಲಿಯೇ ಮೃತನಾದ. ಬೆಡಗಿನ ಬುದ್ಧಿಜೀವಿಗಳ ಜೊತೆ ಮೊದಮೊದಲು ಸೇರುತ್ತಿದ್ದನಾದರೂ ಅನಂತರ ಏಕಾಕಿಯಾಗಿ ಜೀವನ ಸಾಗಿಸಿದ. ತಂದೆ ವೈದ್ಯಶಾಸ್ತ್ರ ಪ್ರಾಧ್ಯಾಪಕ. ತಾಯಿ ಯಹೂದ್ಯ ವಂಶದಿಂದ ಬಂದವಳು. ತಾಯಿಯಲ್ಲಿ ಈತನಿಗೆ ಪರಮ ಭಕ್ತಿ. ಅವಳನ್ನೇ ಹೆಚ್ಚಾಗಿ ಅವಲಂಬಿಸಿಕೊಂಡಿದ್ದ. ವಿದ್ಯಾಭ್ಯಾಸ ಮುಗಿಸಿಕೊಂಡು ಒಂದು ವರ್ಷ ಸೈನಿಕನಾಗಿ ಸೇವೆಸಲ್ಲಿಸಿ ಎರಡು ವರ್ಷ ನ್ಯಾಯಶಾಸ್ತ್ರ ರಾಜನೀತಿಗಳನ್ನು ವ್ಯಾಸಂಗ ಮಾಡಿ, ಸಾಹಿತ್ಯಕೃಷಿಗೆ ಕೈ ಹಾಕಿದ ಹತ್ತು ವರ್ಷದ ಹುಡುಗನಾಗಿದ್ದಾಗ ಉಬ್ಬಸ ರೋಗಕ್ಕೆ ಗುರಿಯಾಗಿ ಶ್ರಮದ ಉದ್ಯೋಗಕ್ಕೆ ಅನರ್ಹನಾದ. ಹೀಗಾಗಿ ಲೇಖನ ವ್ಯವಸಾಯಕ್ಕೆ ತೊಡಗಿದ.

	ಸಾಹಿತ್ಯಕ ಪತ್ರಿಕೆಗಳಿಗೆ ಲೇಖನ ಬರೆದ. ಒಂದು ಪತ್ರಿಕೆಗೆ ಸಹ ವ್ಯವಸ್ಥಾಪಕನಾದ. 1896 ರಂದು ಪ್ಲಷರ್ಸ್ ಅಂಡ್ ರಿಗ್ರೆಟ್ಸ್ ಎಂಬ ಹೆಸರಿನಲ್ಲಿ ಸಣ್ಣಕಥೆ ಲಘುಪ್ರಬಂಧ ಕವನಗಳ ಒಂದು ಸಂಕಲನವನ್ನು ಪ್ರಕಟಿಸಿದ. ಅದರಲ್ಲಿ ಚಿತ್ರಗಳೂ ಸಂಗೀತದ ಹಿನ್ನೆಲೆಗಳೂ ಇದ್ದುವು. ಅನತೋಲ್ ಫ್ರಾನ್ಸನ ಮುನ್ನಡಿಯೂ ಇತ್ತು. ಪುಸ್ತಕ ಜನಮನ್ನಣೆ ಪಡೆಯಿತು. 1914ರಲ್ಲಿ ಇವನ ಲೇಖನಗಳೆಲ್ಲ ಪುಸ್ತಕ ರೂಪದಲ್ಲಿ ಹೊರಬಂದುವು.

	ಬಾಲ್ಯದಿಂದಲೂ ಈತ ನರರೋಗಿ. ಉಬ್ಬಸದಿಂದ ನರಗಳು ಇನ್ನೂ ದುರ್ಬಲವಾದವು. ಜೊತೆಗೆ ಪ್ರಬಲವಾದೊಂದು ಮಾನಸಿಕ ತುಯ್ಯಾಟವೂ ಇತ್ತು. ಸಲಿಂಗ ಕಾಮದ ದುರ್ಬಯಕೆ ಬೇರೆ. ಉಬ್ಬಸ ಅಧಿಕವಾಯಿತು. ತನ್ನ ಕಾದಂಬರಿಯಲ್ಲಿ ಸ್ವಭಾವವಕ್ರತೆಯನ್ನು ತಿರುತಿರುಗಿ ವಿಶ್ಲೇಷಿಸಿ ವರ್ಣಿಸಿರುವುದಕ್ಕೆ ಅದೇ ಕಾರಣ. ಆರೋಗ್ಯ ಕೆಟ್ಟುಹೋಗಿ ಚೈತನ್ಯ ಕುಂದಿದ್ದರಿಂದ ಮನೆಯಲ್ಲಿಯೇ ತಂಗಿರುತ್ತ, ಮಿತ್ರರನ್ನು ಅಲ್ಲಿಗೇ ಕರೆಸಿಕೊಳ್ಳುತ್ತ ಕಾಲ ನೂಕಿದ. ರಸ್ಕಿನ್ನನ ಪ್ರಭಾವಕ್ಕೆ ಒಳಗಾಗಿ ಅವನ ಎರಡು ಕೃತಿಗಳನ್ನು ಭಾಷಾಂತರ ಮಾಡಿದ. ಹಾಗೂ ಬರ್ಗ್‍ಸನ್ನನ ಕೃತಿಗಳನ್ನು ಓದಿದ. ಈ ನಡುವೆ ತಾಯಿ ಸತ್ತುಹೋದಳು (1905). ನಿತ್ಯರೋಗಿಯಾಗಿ ಹಾಸಿಗೆ ಹಿಡಿದ ಪ್ರೂಷ್ಟ್ ತನ್ನ ವೇದನೆಯನ್ನೂ ಲೆಕ್ಕಿಸದೆ ಹದಿನಾರು ಸಂಪುಟಗಳ ಒಂದು ಬೃಹತ್ ಕಾದಂಬರಿಯನ್ನು ರಚಿಸಿದ (1913-27). ಅದರ ಇಂಗ್ಲಿಷ್ ಹೆಸರು ರಿಮೆಂಬ್ರೆನ್ಸ್ ಆಫ್ ತಿಂಗ್ಸ್ ಪಾಸ್ಟ್ (ಅನುವಾದ 1922-37). ಸಂಕೀರ್ಣ ಕಲಾತಂತ್ರದಿಂದ ಮನಸ್ಸಿನ ತುಯ್ದಾಟಗಳನ್ನು ವರದಿಗೈಯುವ ಈ ಬೃಹದ್ಗ್ರಂಥ ಸಾಮಾನ್ಯಾರ್ಥದ ಕಾದಂಬರಿಯಲ್ಲ. ಯಾವುದೊ ನಿರ್ದಿಷ್ಟ ಕಥೆಯ ನಿರೂಪಣೆಯಲ್ಲ. ಆದರೂ ಅದರಲ್ಲಿ ಕಥೆಯಿದೆ. ಅದೊಂದು ಕಾದಂಬರಿ, 20ನೆಯ ಶತಮಾನವನ್ನು ಚೆನ್ನಾಗಿ ಪ್ರತಿಬಿಂಬಿಸುವ ಕಾದಂಬರಿ. ಪ್ರೂಸ್ಟನ ಆತ್ಮಚರಿತ್ರೆಯೂ ಹೌದು! ಅದರಲ್ಲಿ ಬರುವ ಮುಖ್ಯಪಾತ್ರ ಮಾರ್ಸೆಲ್ ತನ್ನ ನೆನಪುಗಳನ್ನು ತಾನೇ ನಿರೂಪಿಸುತ್ತಾನೆ, ಸ್ವಕಥನಗಾರನಂತೆ; ಆತ ನಿರೂಪಿಸುವುದೆಲ್ಲ ಅದೇ ಮಾರ್ಸೆಲನ ಅನುಭವಗಳು ಆಗುಹೋಗುಗಳು. ಎರಡು ದೃಷ್ಟಿಗಳನ್ನೂ ಗಮನಿಸಬೇಕು. ಗೋಜಾಗದಂತೆ ನೋಡಿಕೊಳ್ಳಬೇಕು. ಕೊನೆಯ ಭಾಗವನ್ನು ಓದಿದಾಗ ಒಂದೇ ಪಾತ್ರದ ಎರಡು ವೇಷಗಳ ಆವಶ್ಯಕತೆಯೂ `ಗತಕಾಲ ನೆನಪು-ಕಾಲಾರ್ಜನೆ ಎಂಬ ಸೂತ್ರದ ಗಹನತ್ವವೂ ಸ್ವಾರಸ್ಯವೂ ನೂತನತೆಯೂ ಮಿಂಚುತ್ತವೆ. ತನಗೆ ಬಾಲ್ಯ ತಾರುಣ್ಯ ಮಧ್ಯವಯಸ್ಸಿನಲ್ಲಿ ಆದ ಆಶೆ ನಿರಾಶೆ ಆವೇಶ ಆನಂದ ಇತ್ಯಾದಿ ಅನುಭವಗಳ ಹಿಂದೆ ಅವೆಲ್ಲವನ್ನೂ ಮೀರಿಸಿದ ಒಂದು ಅಮೂರ್ತ ಸಾರಸತ್ತ್ವ ಇದೆಯೆಂದು ಪ್ರೂಸ್ಟ್ ಭಾವಿಸಿಕೊಂಡ. ಆದರೆ ಪರಿಜ್ಞಾನ ಆಕಸ್ಮಾತ್ತಾಗಿ ಉಂಟಾಗುತ್ತದೆ. ಅನೈಚ್ಛಿಕ ಜ್ಞಾಪಕದ ಮೂಲಕ ಹಾಗೂ ಯಾವುದೋ ಒಂದ ಕ್ಷುಲ್ಲಕ ಘಟನೆ ಅದಕ್ಕೆ ಪ್ರಚೋದಕವಾಗುತ್ತದೆ. ಬಿಸ್ಕತ್ತನ್ನು ಚಹದಲ್ಲಿ ಅದ್ದುವಾಗ, ಜೋಡಿನ ದಾರವನ್ನು ಬಿಚ್ಚುವಾಗ, ಅನಿರೀಕ್ಷಿತ ಒಳನೆನಪು ಮೂಡಿಬಂದು ಎಲ್ಲೊ ಮೂಲೆಯಲ್ಲಿ ಸುಪ್ತವಾಗಿದ್ದು ಹಳೆಯ ಘಟನಾವಳಿಯನ್ನು ಅಂತಃಚಕ್ಷುವಿನ ಮುಂದೆ ಹರಡಿ ಹಿಂದಿನದನ್ನೂ ಇಂದಿನದನ್ನೂ ಬೆಸುಗೆ ಹಾಕುತ್ತೆ. ಅಂಥ ವಿಶಿಷ್ಟ ಅನುಭವವನ್ನು ಬರೆದಿಡಬೇಕೆಂದು ಹಲವು ಸಾರಿ ಹಂಬಲಿಸಿ ಕೊನೆಗೆ ಅದು ಮಾತಿಗೆ ಎಟುಕದ ಸಂಗತಿಯೆಂದು ನಿರ್ಧರಿಸಿ ಸುಮ್ಮನಾದ ಪ್ರೂಸ್ಟ್ ವರ್ಷಾನಂತರ ಪ್ಯಾರಿಸ್ಸಿಗೆ ಹೋಗಿ ಯಾರನ್ನೋ ಭೇಟಿಮಾಡಲು ಕಾದಿದ್ದಾಗ ಮೂರು ಕ್ಷುದ್ರ ಚಲನವಲನೆ ಒಂದಾದ ಮೇಲೊಂದು ಉತ್ತೇಜಕವಾದುವಂತೆ ಭೂತ ವರ್ತಮಾನ ಸಂವೇದನೆಗಳ ನಿಕಟ ಸಾಮ್ಯದಿಂದ ಒತ್ತಲ್ಪಟ್ಟವನಾಗಿ ಪ್ರೂಸ್ಟ್ ಅತೀಂದ್ರಿಯ ಸಾರಸತ್ತ್ವದ ದರ್ಶನವನ್ನು ಪಡೆದ. ಪರಿಣಾಮವಾಗಿ ಅವನ ಗ್ರಾಹಕಶಕ್ತಿ ತೀಕ್ಷ್ಣವಾಯಿತು. ವಿದ್ಯಮಾನಗಳ ಕ್ರಮಾಗತ ಸರದಿ ನಡೆವಳಿ ಕಳಚಿಬಿದ್ದು ಅವು ಒಂದೇ ಆಗಿ ಕಾಲವೆಂಬ ಆಯಾಮವೇ ಅದೃಶ್ಯವಾಯಿತು. ಅದೊಂದು ಮಹಾ ಅನುಭಾವ; ಅದನ್ನು ತಾನೇ ತಾನೊಬ್ಬನೇ ವಚನದಲ್ಲಿ ನಿರೂಪಿಸತಕ್ಕವ ಎಂಬ ಅಭಿಮತವೂ ಮನಸ್ಸಿನಲ್ಲಿ ಬಲಿಯಿತು. ಲೇಖನ ಬರಿ ಕಸಬಲ್ಲ. ಅದಕ್ಕಾಗಿಯೇ ತನ್ನ ಜೀವನ ಇಲ್ಲಿಯವರೆಗೂ ನಡೆದು ಬಂದು ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದೆಯೆಂಬ ನಿಜಾಂಶ ಮಂದಟ್ಟಾಯಿತು. ಬರೆಯುವ ಸಂಕಲ್ಪ ಸ್ಥಿರವಾಯಿತು.

	ಮಾನಸಿಕ ಮತ್ತು ಆಧ್ಯಾತ್ಮಕ ವಿಷಯಗಳಿಗೆ ವಾಸ್ತವಿಕ ವ್ಯಕ್ತಿ ದೃಶ್ಯ ಘಟನೆಗಳ ಮೂಲಕವೇ ಆಕಾರವೀಯುವುದು ಅನಿವಾರ್ಯ. ತನ್ನ ತಾಯಿ ಅಜ್ಜಿಗಳ ಅಕ್ಕರೆ, ಗುಎರ್‍ಮಂಟೆ ಶ್ರೀಮಂತ ವಂಶದೊಂದಿಗಿನ ಸಾಹಚರ್ಯ, ಗಿಲ್ಬರ್ಟ್ ಸ್ವಾನಳನ್ನು ಕುರಿತ ಪ್ರೇಮ, ಆಲ್ಬರ್ಟೀನಳೊಡನೆ ಆದ ಕಹಿ ಪ್ರಣಯ, ಓಡೆಟ್, ವಡ್ರ್ಯೂರಿನ್, ಬ್ಲಾಕ್, ಸೇಂಟ್ ಲೂಪ್, ಚಾರ್ಲಸ್-ಮುಂತಾದ ಹಲವು ವ್ಯಕ್ತಿಗಳ ಸಹವಾಸ-ಇಂಥ ಇನ್ನೂ ಅನೇಕ ವಿಚಾರಗಳ ನಿರೂಪಣೆಯಿಂದ ಪ್ರೂಸ್ಟ್ ತನ್ನ ಕಾವ್ಯ ಸಂಕಲ್ಪ ಸಾಧಿಸಿದ. ಆದರೆ ಅವನ್ನು ಓದುವುದು ಕಷ್ಟ, ಅರ್ಥಮಾಡಿಕೊಳ್ಳುವುದು ಇನ್ನೂ ಕಷ್ಟ. ಅವನ ಆಲೋಚನೆ ಉಜ್ಜ್ವಲ ರೂಪಕದಲ್ಲೇ ಓಡುತ್ತದೆ; ಅವನ ವಾಕ್ಯಗಳು ಉದ್ದವಾಗಿ ಅಂಶಗಳನ್ನು ಕಲೆಹಾಕುತ್ತ ಬಹುಮುಖ ತೋರಿಸುತ್ತವೆ; ಸೂಚಕವೂ ವ್ಯಂಗ್ಯವೂ ಆದ ಪದಗುಚ್ಛಗಳು ಪುಷ್ಕಳವಾಗಿ ಬರುತ್ತವೆ; ಎಲ್ಲವೂ ಕಾವ್ಯಮಯ, ಕುತೂಹಲಕರ.

	ಸಾಮಾನ್ಯವಾಗಿ ಕಾದಂಬರಿಯೆಂದು ಕರೆಯಲ್ಪಡುವ ಸಾಹಿತ್ಯಪ್ರಕಾರದ ಮುಖ್ಯಲಕ್ಷಣಗಳು ಎಲ್ಲರಿಗೂ ಗೊತ್ತು. ಅವುಗಳ ಪ್ರಮಾಣದಿಂದ ಅಳೆದರೆ ಪ್ರೂಸ್ಟನ ಗ್ರಂಥ ಕಾದಂಬರಿಯೇ ಅಲ್ಲ. ಆದರೆ ಕಾದಂಬರಿಕಾರನ ಹಿರಿಯ ಗುಣಗಳೆಲ್ಲ ಅವನಲ್ಲಿ ಸ್ಛುಟವಾಗಿಯೂ ಓಜಸ್ಸುಗೂಡಿಯೂ ಇದ್ದದ್ದು ನಿಸ್ಸಂದೇಹ. ಲೋಕ ವೀಕ್ಷಣ, ಸೂಕ್ಮಾಂಶಗಳ ಗ್ರಹಿಕೆ, ಕಲಾಬದ್ಧ ಸಂವೇದನೆ ವಿಶ್ಲೇಷಣೆ ಕೌಶಲ್ಯ ನಿರೂಪಣಾ ಜಾಣ್ಮೆ, ಪ್ರಬಂಧ ರಚನೆ-ಎಲ್ಲದರಲ್ಲಿಯೂ ಅವನನ್ನು ಮೀರಿಸಿದ ಲೇಖಕ ಪ್ರಾಯಶಃ ಒಬ್ಬನೂ ಇಲ್ಲ, ಈ ಬೃಹತ್ ರಚನೆ ಹೇಗೊ ವಿಚಿತ್ರ ತರಹೆಯದಾದರೂ ಒಂದು ಕಾದಂಬರಿಯಾಗಿಯೇ ಒಲಿಸಿಕೊಳ್ಳುತ್ತದೆ. ಸಂಗತಿ ಅಥವಾ ಪ್ರಕರಣವೊಂದನ್ನು ಪ್ರಾರಂಭಿಸಿ ಅದನ್ನೇ ಕ್ಲುಪ್ತವಾಗಿ ಮುಂದುವರಿಸುವ ಹಂಗನ್ನು ಪ್ರೂಸ್ಟ್ ಎಂದೂ ಕಾಣ. ಏತಕ್ಕೆಂದರೆ ಎಲ್ಲೆಲ್ಲೂ ಎಲ್ಲವೂ ಅಪ್ರಸ್ತುತ ಪ್ರಸ್ತಾಪವೆ! ಸಂಪೂರ್ಣ ಅನುಭವಕ್ಕೆ ಅಭಿವ್ಯಕ್ತಿ ಒದಗಿಸುವುದು ತನ್ನ ಕರ್ತವ್ಯವೆಂದು ಬಗೆದಿದ್ದನಾಗಿ ಕಾದಂಬರಿಕಾರ ಸಂಬಂಧವಿಲ್ಲದ್ದು ಎಂದು ತೋರಿ ಬರುವ ಎಷ್ಟೊ ಅಂಶಗಳಿಗೆ ಅವಕಾಶವಿತ್ತಿದ್ದಾನೆ. ಪಾತ್ರಗಳು ಘಟನೆಗಳೂ ಎಂತೊ ಕೊಂಡಿ ಕೂಡಿಕೊಂಡಂತೆ ಇರುವುದರಿಂದ ಯಾವುದೂ ದಾರಿಯಿಂದ ತುಂಬ ದೂರವಾದಂತೆ ಭಾಸವಾಗುವುದಿಲ್ಲ. ಗಡಿಯಾರದ ಟಿಕ್-ಟಿಕ್, ಒಲೆಯಲ್ಲಿನ ಉರಿಯ ಚಟ ಚಟ, ನಾಮಾಂಕಿತಗಳು, ಮೊದಲಾದ ಯಾವ ವಿಚಾರವಾದರೂ ಅದರ ಮೇಲೆ ನಿಧಾನವಾಗಿ ಆಲೋಚಿಸುತ್ತ ಜ್ಞಾಪಕಕ್ಕೆ ತಂದುಕೊಳ್ಳುತ್ತ ವಾಕ್ಯಕ್ಕೆ ವಾಕ್ಯ ಸೇರಿಸುತ್ತ ಪುಟಪುಟಗಳನ್ನು ಮುಗಿಸುವುದು ಇವನ ವಾಡಿಕೆ. ಮಾನಸಿಕ ಚಲನವಲನೆಗಳನ್ನಂತೂ ತುಂಬ ಉತ್ಸಾಹದಿಂದ ವಿವರಿಸುತ್ತಾನೆ.

	ಪ್ರೂಸ್ಟನ ಈ ಕಾದಂಬರಿ ಫ್ರಾನ್ಸಿನ ಮಹೋತ್ತಮ ಕೃತಿಗಳಲ್ಲಿ ಒಂದು. 20ನೆಯ ಶತಮಾನದ ಶ್ರೇಷ್ಠ ಸಾಹಿತ್ಯದಲ್ಲಿ ಅದಕ್ಕೆ ಮಾನ್ಯ ಸ್ಥಾನವಿದೆ. ಇತರ ಲೇಖಕರ ಮೇಲೆ ಇವನ ಪ್ರಭಾವವಂತೂ ಅಚ್ಚಳಿಯದ್ದು.
(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ